ಬಸವರಾಜು ಎಲ್
	1919-. ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಇಡಗೂರಿನಲ್ಲಿ. 1919ರ ಅಕ್ಟೋಬರ್ 7ರಂದು. ಇಡಗೂರು ಸಿದ್ಧಲಿಂಗ, ಮೈಸೂರುಗಳಲ್ಲಿ ವಿದ್ಯಾಭ್ಯಾಸ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ, ನಂತರ ಎಂ.ಎ. ಪದವಿ, ವಿದ್ಯಾಭ್ಯಾಸದದುದ್ದಕ್ಕೂ ಪ್ರತಿಕೂಲ ಪರಿಸ್ಥಿತಿ ಎದುರಿಸಬೇಕಾಗಿ ಬಂದರೂ ಆತ್ಮ ಸ್ಥೈರ್ಯದಿಂದ ಬದುಕನ್ನು ರೂಪಿಸಿಕೊಂಡರು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭ. ನಂತರ ರೀಡರ್ ಮತ್ತು ಪ್ರಾಧ್ಯಾಪಕರಾಗಿ ಮೂರು ದಶಕಗಳ ಕಾಲ ಸೇವೆ. 1980ರಲ್ಲಿ ನಿವೃತ್ತಿ. 

	ಸಂಶೋಧನಾ ಶಿಲ್ಪಿ ಪ್ರೊ. ಎಲ್ ಬಸವರಾಜು ಅವರಿಗೆ ಸಂಶೋಧನೆಯಾಗಲಿ, ಸಂಪಾದನೆಯಾಗಲಿ ಸತ್ಯನಿಷ್ಠೆಯೇ ಮುಖ್ಯ; ಕೂಲಂಕಷವಾಗಿ ಶೋಧಿಸಿಯೇ ತೀರ್ಮಾನಕ್ಕೆ ಬರುವ ವಿದ್ವಾಂಸರು. ಬಹುಮುಖ ಪ್ರತಿಭಾವಂತರಾದ ಶ್ರೀಯುತರು ಪ್ರಮುಖವಾಗಿ ಗ್ರಂಥ ಸಂಪಾದನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಳೆದ ಅರ್ಧ ಶತಮಾನದಿಂದ ಸಾಹಿತ್ಯಕೃಷಿಯಲ್ಲಿ ತೊಡಗಿರುವ ಸಮತೂಕದ ಬರಹಗಾರರು.

ಪ್ರೊ. ಎಲ್ ಬಸವರಾಜು ಅವರಿಗೆ ಗ್ರಂಥಸಂಪಾದನೆ ಮತ್ತು ಸಂಶೋಧನೆಯತ್ತ ವಿಶೇಷ ಒಲವು. ಮಹಾಕವಿ ಪಂಪನ ಕಾವ್ಯದ ಮೂಲಸೆಲೆಯನ್ನು ತಲಸ್ಪರ್ಶಿ ಅಧ್ಯಯನದಿಂದ ಶೋಧಿಸಿ, ತಿಳಿಗೊಳಿಸಿ, ಮೂಲಪಾಠವನ್ನು ನೀಡುವ `ಪಂಪನ ಆದಿಪುರಾಣ'ದ ಸಂಪಾದನೆ, ಗ್ರಂಥ ಸಂಪಾದನ ಕ್ಷೇತ್ರದಲ್ಲಿ ವಿನೂತನ ಪ್ರಯೋಗವಾಗಿ ಮೂಡಿದ `ವಿಕ್ರಮಾರ್ಜುನ ವಿಜಯದ ಸಂಪಾದನೆ; ಈ ಸಾಮಾನ್ಯನಪರವಾದ ಕಾಳಜಿಯಲ್ಲಿ ಕಾವ್ಯಗ್ರಹಿಕೆಗೆ ಅನುಕೂಲವಾಗುವಂತೆ ರಚಿಸಿದ ಸರಳ ಪಂಪ ಭಾರತ, ಪಂಪನ ಸಮಸ್ತ ಭಾರತ ಕಥಾಮೃತ ಕೃತಿಗಳು ಪ್ರೊ. ಎಲ್. ಬಸವರಾಜು ಅವರ ವಿದ್ವತ್ ವಿಚಕ್ಷಣತೆಗೆ ಸಾಕ್ಷಿಯಾಗಿವೆ.

	ವಚನ ಸಾಹಿತ್ಯ ಕುರಿತಂತೆ ನಡೆಸಿದ ಸಂಪಾದನೆ ಮತ್ತು ಸಂಶೋಧನೆಯ ಫಲವಾಗಿ ರೂಪುಗೊಂಡ ಕೃತಿಗಳು ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ದೇವರ ದಾಸಿಮಯ್ಯನ ವಚನಗಳು. ಶೂನ್ಯ ಸಂಪಾದನೆಯಲ್ಲಿ ಮೊದಲನೆಯದಾದ `ಶಿವಗುಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆ ಅವರ ಅಧ್ಯಯನಶೀಲತೆಯಿಂದ ಮೂಡಿದ ಕೃತಿ. `ಜ್ಯೋತಿರ್ಲಿಂಗದ ಮೂರು ಮುಖಗಳು, `ತಿರುಮಲಾರ್ಯ ಮತ್ತು ಚಿಕ್ಕದೇವರಾಜ ಒಡೆಯರು ಅವರ ಪ್ರಮುಖ ವಿಮರ್ಶಾ ಕೃತಿಗಳು. ಹರಿದಾಸರಂತೆ ಶಿವಶರಣರು ಗೀತೆಗಳನ್ನು ರಚಿಸಿ ಹಾಡುತ್ತಿದ್ದಾರೆಂದು ಸಾಧಾರಪೂರ್ವಕವಾಗಿ ನಿರೂಪಿಸಿರುವ ಗ್ರಂಥ `ಶಿವದಾಸ ಗೀತಾಂಜಲಿ ಶ್ರೀಯುತರ ಮಹತ್ವದ ಕೃತಿ. ಪ್ರೊ. ಎಲ್ ಬಸವರಾಜು ಅವರು ಸಂಪಾದಿಸಿರುವ ಶಾಸ್ತ್ರಗ್ರಂಥಗಳು ನಾಗವರ್ಮನ `ಛಂದೋಂಬುಧಿ, ಈಶ್ವರನ `ಕವಿಜಿಹ್ವಾಬಂಧನ, ಗುಣಚಂದ್ರನ `ಛಂದಸ್ಸಾರ, ವೀರಭದ್ರನ `ನಂದಿಛಂದೋರ್ಣವ-ಕನ್ನಡ ಛಂದಸ್ಸಿನ ಈ ಪ್ರಮಾಣಗ್ರಂಥಗಳನ್ನೆಲ್ಲ ಒಂದೆಡೆ ಸೇರಿಸಿ ವೇಲಣಕರರ ಜಯದಾಮನ್ ಮಾದರಿಯಲ್ಲಿ ರಚಿಸಿದ `ಕನ್ನಡ ಛಂದಸ್ಸಂಪುಟ' ಕೃತಿ ಮತ್ತು ಕೇಶಿರಾಜನ `ಶಬ್ದಮಣಿ ದರ್ಪಣ'ವನ್ನು ಇವರು ಸಂಪಾದಿಸಿದ್ದಾರೆ.

	ಪ್ರೊ. ಎಲ್ ಬಸವರಾಜು ಅವರ ಅನುವಾದಿತ ಕೃತಿಗಳು ಸಂಸ್ಕøತ ಕವಿ ಭಾಸನ ಆರು ಏಕಾಂಕಗಳು `ಭಾರತ ರೂಪಕ ಹೆಸರಿನಲ್ಲೂ, ಭಾಸನ ರಾಮಾಯಣ ಆಧಾರಿತ ಮೂರು ನಾಟಕಗಳು `ರಾಮಾಯಣ ನಾಟಕ ತ್ರಿವೇಣಿ ಹೆಸರಿನಲ್ಲೂ ಅನುವಾದಿತವಾಗಿವೆ. ಅನುವಾದಿತ ಕೃತಿಗಳಾದರೂ `ಬುದ್ಧ ಚರಿತೆ ಮತ್ತು `ಸೌಂದರನಂದ ಕೃತಿಗಳು ಪ್ರೊ. ಎಲ್ ಬಸವರಾಜು ಅವರ ಪ್ರತಿಭಾಸ್ಪರ್ಶದಿಂದ ಸೃಜನಶೀಲತೆಯ ಮೆರುಗನ್ನು ಪಡೆದಿವೆ. `ಠಾಣಾಂತರ ಮತ್ತು `ಜಾಲಾರಿ' ಕವನಸಂಕಲನಗಳು ಶ್ರೀಯುತರ ಸೃಜನಶೀಲ ಕೃತಿಗಳು.
ಸುಮಾರು ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಒಂದು ಸಂಸ್ಥೆ ಮಾಡಬಹುದಾದ ಕೆಲಸಗಳನ್ನು ಏಕಾಂಗಿಯಾಗಿಯೇ ಸಾಧಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಅವರು ಸಂಪಾದಿಸಿದ ಕೃತಿಗಳು ನಿಷ್ಕøಷ್ಟತೆಯಿಂದ ಕೂಡಿದ ವಿದ್ವತ್ಪ್ರತಿಭೆಯ ಆಗರಗಳಾಗಿವೆ.
ಪ್ರಶಸ್ತಿ ವಾಚಿಕೆ :

	ಬಸವರಾಜು ಅವರಿಗೆ ಮೈಸೂರು ವಿಶ್ವವಿದ್ಯಾಲಯವು ಗೌರವ ಡಿಲಿಟ್ ಪದವಿ ನೀಡಿ ಗೌರವಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರೂ ಕೂಡ. ವಿದ್ವತ್ತು, ಸೃಜನಶೀಲತೆ ಮತ್ತು ಸಂಶೋಧನ ಮನೋಭಾವ ಮುಪ್ಪುರಿಗೊಂಡ ನಾಡಿನ ಹಿರಿಯ ವಿದ್ವಾಂಸರಾದ ಪ್ರೊ. ಎಲ್ ಬಸವರಾಜು ಅವರಿಗೆ ಕರ್ನಾಟಕ ಸರ್ಕಾರವು 2000ನೇ ವರ್ಷದ ಸಂತೋಷದಿಂದ `ಪಂಪ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ಅರ್ಪಿಸುತ್ತದೆ.
(ಎಂ.ಬಿ.ಸಿಂಗ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ